ಬ್ವಾಲೊ - ಡೇಪ್ರೇಓ, ನಿಕೊಲಾಸ್
1636-1711. ಫ್ರೆಂಚ್ ಕವಿ ಹಾಗೂ ವಿಮರ್ಶಕ. ಗಿಲಿಸ್ ಬ್ವಾಲೋ ಎಂಬ ಗುಮಾಸ್ತನೊಬ್ಬನ ಬಡಕುಟುಂಬದಲ್ಲಿ ಅವನ ಹದಿನೈದನೆ ಮಗುವಾಗಿ ನಿಕೊಲಾಸ್ 1636ರಲ್ಲಿ ಜನಿಸಿದ. ಕೇವಲ ಎರಡು ವರ್ಷದ ಹುಡುಗನಾಗಿದ್ದಾಗ ತಾಯಿಯನ್ನು ಕಳೆದುಕೊಂಡು ಮಾತೃಪ್ರೇಮದಿಂದ ವಂಚಿತನಾದ. ಈತ ಕಾಲೇಜ್ ಡೀಬೊವಿಯಾ ಮತ್ತು ಸಾರ್ಬಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಮಾಡಿ ವಕೀಲಿ ವೃತ್ತಿ ಆರಂಭಿಸಲು 1656ರ ಡಿಸೆಂಬರಿನಲ್ಲಿ ಅರ್ಹತೆ ಪಡೆದ. ಆದರಿ 1627 ರಿಂದ ಮುಂದೆ ವಕೀಲಿ ವೃತ್ತಿಯನ್ನು ಸಂಪೂರ್ಣವಾಗಿ ತ್ಯಜಿಸಿ, ಸಾಹಿತ್ಯ ಕ್ಷೇತ್ರದಲ್ಲಿ ನೆಲೆನಿಂತ. ಇವನ ಮೊದಲ ವಿಡಂಬನ ಕಾವ್ಯ ಫಸ್ಟ್‍ಸಾಟೈರ್ 1660ರಲ್ಲಿ ಹೊರಬಂತು. ಇದು ಜೂವಿನಲ್‍ನ ಮೂರನೆಯ ವಿಡಂಬನ ಕಾವ್ಯದ ಅನುಕರಣೆಯಾದರೂ ಇವನ ಕವಿತೆಯಲ್ಲಿ ಒಂದು ನವೀನತೆ ಕಂಡು ಬರುತ್ತದೆ. ಸಹೃದಯಿಯಾದ ಕವಿಯೊಬ್ಬ ಪ್ಯಾರಿಸ್ ಪಟ್ಟಣವನ್ನು ಬೀಳ್ಕೊಡುವುದೇ ಈ ಕಾವ್ಯದ ವಸ್ತು. ಈ ಕೃತಿ ಪ್ರಕಟವಾದ ತರುಣದಲ್ಲೇ ಒಂದಾದ ಮೇಲೊಂದರಂತೆ ಇನ್ನಿತರ ಎಂಟು ಕೃತಿಗಳು ಶೀಫ್ರವಾಗಿ ಪ್ರಕಟವಾದವು. ಈ ಮೊದಲ ವಿಡಂಬನ ಕಾವ್ಯಗಳಲ್ಲಿಯ ತೀವ್ರಾಸಕ್ತಿಗೆ ಎರಡು ಮುಖ್ಯ ಕಾರಣಗಳನ್ನು ವಿಮರ್ಶಕರು ಸೂಚಿಸಿದ್ದಾರೆ. ಮೊದಲನೆಯದಾಗಿ ಅಂದಿನ ಸುಪ್ರಸಿದ್ಧ ಕವಿಗಳಾದ ಜೀನ್‍ಚಾಪ್ಲೇನ್, ಚಾರಲ್ಸ್ ಕಾಟಿನ್, ಫಿಲಿಪ್‍ಕ್ವಿನೋ ಮತ್ತಿತರ ಕವಿಗಳ ಶೈಲಿ ಮತ್ತು ರೀತಿಯನ್ನು ಅನುಕರಣೆಮಾಡಿ ಅವರನ್ನು ಚತುರರೀತಿಯಲ್ಲಿ ಅಪಹಾಸ್ಯಮಾಡಿರುವುದು; ಎರಡನೆಯದಾಗಿ, ಫ್ರೆಂಚ್ ಕಾವ್ಯದ ಸಾಧ್ಯಾಸಾಧ್ಯತೆಗಳನ್ನು ನಿಯಮ ನಿದರ್ಶನಗಳ ಮೂಲಕ ತೋರಿಸಿರುವುದು.

	ಈತ 1663-1664ರಲ್ಲಿ ಪ್ರಕಟಿಸಿದ ಪದ್ಯಗಳಲ್ಲಿ ಫ್ರಾನ್ಸಿನ ಅಂದಿನ ಅಸದೃಶ ನಾಟಕಕಾರ ಮೋಲಿಯರ್‍ಗೆ ತನ್ನ ಕೃತಜ್ಞತೆ ವ್ಯಕ್ತಪಡಿಸಿದ್ದಾನೆ. 1664ರಲ್ಲಿ ರಂಜನ ಕಾವ್ಯಗಳ ನಾಯಕರೊಡನೆ ಸಂಭಾಷಣೆ ಎಂಬ ತೀಕ್ಷ್ಣ ವಿಡಂಬನೆಯನ್ನು ಗದ್ಯರೂಪದಲ್ಲಿ ರಚಿಸಿದ. ಹಸ್ತಪ್ರತಿರೂಪದಲ್ಲಿಯೇ ಜನಪ್ರಿಯವಾಗಿದ್ದ ಈ ಗದ್ಯಕೃತಿ ಆ ಕಾಲದ ಸವಿಸ್ತಾರವಾದ ರಂಜನ ಕಾವ್ಯಗಳನ್ನು ಅಪಹಾಸ್ಯಕ್ಕೆ ಗುರಿಪಡಿಸಿದೆ. ಕಾರಣಾಂತರಗಳಿಂದ 1713ರ ತನಕ ಈ ಕೃತಿ ಪ್ರಕಟವಾಗಲಿಲ್ಲ. 1666ರಲ್ಲಿ ಮತ್ತೆ ಕೆಲವು ವಿಡಂಬನ ಕಾವ್ಯಗಳನ್ನು ಪ್ರಕಟಿಸಿದ ಅನಂತರ 1669ರಲ್ಲಿ ಪತ್ರರೂಪದ ಕಾವ್ಯಗಳನ್ನು ರಚಿಸಿದ. ಈ ಎಪಿಟ್ರೆಗಳು ಇವನ ವಿಡಂಬನ ಕಾವ್ಯಗಳಿಗಿಂತ ಹೆಚ್ಚು ಗಂಭೀರವಾಗಿಯೂ ಪರಿಪಕ್ವವಾಗಿಯೂ ರಮ್ಯವಾಗಿಯೂ ಮನರಂಜಕವಾಗಿಯೂ ಇವೆ. ಫ್ರಾನ್ಸ್ ದೊರೆ ಹದಿನಾಲ್ಕನೆಯ ಲೂಯಿಯ ಮನಸೆಳೆದ ಈ ಕಾವ್ಯಗಳು ನಿಕೊಲಾಸ್‍ನನ್ನು ರಾಜಾಸ್ಥಾನಕ್ಕೆ ಕೊಂಡೊಯ್ದುವು. ನಿನ್ನ ಅತ್ಯಂತ ಸುಂದರ ಕವನ ಯಾವುದೆಂದು ಪ್ರಶ್ನಿಸಿದ ರಾಜನಿಗೆ ಚತುರನಾದ ನಿಕೊಲಸ್ ಪ್ರಕಟವಾಗದ ತನ್ನ ಕೆಲವು ಸ್ತೋತ್ರ ಪದ್ಯಭಾಗಗಳ ವಾಚನ ಮಾಡಿದ. ಇದರಿಂದ ಹರ್ಷಿತನಾದ ರಾಜ ಬ್ವಾಲೊ-ಡೇಪ್ರೇಓ, ನಿಕೊಲಾಸ್ ಕವಿಗೆ ಉದಾರವಾದ ಗೌರವವೇತನವಿತ್ತು ಸನ್ಮಾನಿಸಿದ.

	1674ರಲ್ಲಿ ಪ್ರಕಟವಾದ ಲ ಆರ್ಟ್ ಪೊಯಿಟಿಕ್ ಎಂಬ ವಿಮರ್ಶಾ ಗ್ರಂಥ ನಿಕೊಲಾಸ್‍ನ ಮಹತ್ತ್ವದ ಕೃತಿ. ಲ್ಯಾಟಿನ್ ಕವಿ ಹೊರೇಸನ ಆರ್ಸ್‍ಪೊಯೆಟಿಕ್ ಎಂಬ ಕೃತಿಯ ಮಾದರಿಯಲ್ಲಿ ರಚಿತವಾಗಿರುವ ಈ ಕೃತಿ ಕಾವ್ಯಮೀಮಾಂಸೆಯನ್ನು ಕುರಿತ ಲಾಕ್ಷಣಿಕ ಗ್ರಂಥ. ಫ್ರೆಂಚ್ ಕಾವ್ಯಕ್ಕೆ ಸೂತ್ರ ನೀತಿಗಳನ್ನು ನಿಯಮಿಸುವ ಈ ಕೃತಿ ಫ್ರೆಂಚ್ ಸಾಹಿತ್ಯದ ಒಂದು ಅಮೂಲ್ಯ ಕೃತಿ ಎಂಬುದು ವಿಮರ್ಶಕರ ಅಭಿಪ್ರಾಯ. ಈ ಗ್ರಂಥ ನಾಲ್ಕು ಭಾಗಗಳನ್ನೊಳಗೊಂಡಿದೆ. ಮೊದಲ ಮತ್ತು ಕೊನೆಯ ಭಾಗಗಳಲ್ಲಿ ಸಾಮಾನ್ಯ ಕಾವ್ಯತತ್ತ್ವಗಳ ನಿರೂಪಣೆಯಿದೆ. ಎರಡನೆಯ ಭಾಗದಲ್ಲಿ ಪಾಸ್ಟೊರಲ್ (ಹಳ್ಳಿಯ ಜೀವನವನ್ನು ಕುರಿತ ಕೃತಿಗಳು), ಎಲಿಜಿ (ಶೋಕಕಾವ್ಯ), ಓಡ್ (ಪ್ರಗಾಥ), ಎಪಿಗ್ರಾಮ್ (ಆಶುಕವಿತೆ, ಚುಟಕ), ಸಾಟೈರ್ (ವಿಡಂಬನೆ) ಎಂಬ ಕಾವ್ಯ ರೂಪಗಳ ವಿವರಣೆ ಇದೆ. ಮೂರನೆಯ ಭಾಗದಲ್ಲಿ ದುರಂತ ಕಾವ್ಯ ಮತ್ತು ಮಹಾಕಾವ್ಯಗಳ ರೂಪಲಕ್ಷಣಗಳ ವಿವೇಚನೆ ಇದೆ. ಜಾನ್ ಡ್ರೈಡನ್ ಎಂಬ ಹದಿನೆಂಟನೆಯ ಶತಮಾನದ ಪ್ರತಿಭಾವಂತ ಇಂಗ್ಲಿಷ್ ಕವಿಯಿಂದ ಪರಿಷ್ಕರಿಸಲ್ಪಟ್ಟ ಈ ಕೃತಿಯ ಭಾಷಾಂತರ ಇಂಗ್ಲಿಷ್ ಸಾಹಿತ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಅಲೆಕ್ಸಾಂಡರ್ ಪೋಪ್ ಎಂಬ ಪ್ರಸಿದ್ಧ ಇಂಗ್ಲಿಷ್ ವಿಡಂಬನ ಕವಿಯ ಎಸ್ಸೇ ಆನ್ ಕ್ರಿಟಿಸಿಸಮ್ ಎಂಬ ಕೃತಿಯ ರಚನೆಗೆ ಇದು ಸ್ಫೂರ್ತಿ ನೀಡಿತು.

	1674ರಲ್ಲಿ ಪ್ರಕಟವಾದ ಲುಟ್ರಿನ್ ಎಂಬ ಉದಾತ್ತ ಶೈಲಿಯ ವಿಕಟಾನುಕರಣ (ಮಾಕ್-ಹಿರಾಯಿಕ್ ಪೊಯಮ್) ಕಾವ್ಯವು ಅಲೆಕ್ಸಾಂಡರ್ ಪೋಪನ ರೇಪ್ ಆಫ್ ದಿ ಲಾಕ್ ಎಂಬ ಸೊಗಸಾದ ಕಾವ್ಯರಚನೆಗೆ ಮಾದರಿಯಾಯಿತು. ಆದರೆ ಪೋಪ್‍ನ ಇಂಗ್ಲಿಷ್ ಕವನ ಕಲ್ಪನಾಶಕ್ತಿಯಲ್ಲೂ ರಚನಾ ಕೌಶಲ್ಯದಲ್ಲೂ ಬಲು ಮಟ್ಟಿಗೆ ಉತ್ತಮವಾಗಿದೆಯೆಂಬುದು ತಜ್ಞರ ಅಭಿಪ್ರಾಯ, ನಾಲ್ಕು ಆಶ್ವಾಸನಗಳಿದ್ದ ಲುಟ್ರಿನ್ ಕಾವ್ಯಕ್ಕೆ ನಿಕೊಲಾಸ್ ಇನ್ನೆರಡು ಆಶ್ವಾಸಗಳನ್ನು ಸೇರಿಸಿದ. ಆದರೆ ಈ ಹೊಸ ಆಶ್ವಾಸಗಳು ಕಾವ್ಯದ ಸೊಗಸನ್ನು ಸ್ವಲ್ಪಮಟ್ಟಿಗೆ ಕಳೆಗುಂದಿಸಿದುವು. ಕೊನೆಯ ಆಶ್ವಾಸವಂತೂ ತೀರ ನಿಸ್ಸತ್ತ್ವವಾಗಿದೆಯೆಂದೂ ಕಾವ್ಯಕ್ಕೆ ಕುಂದುಂಟುಮಾಡಿದೆಯೆಂದೂ ಕೆಲವರ ವಾದ. ಅದೇ ವರ್ಷ ಈತ ಲಾಂಜೈನಸ್‍ನ ಆನ್ ದಿ ಸಬ್‍ಲೈಮ್ ಎಂಬ ಪ್ರಾಚೀನ ಲಾಕ್ಷಣಿಕ ಗ್ರಂಥದ ಭಾಷಾಂತರ ಪ್ರಕಟಿಸಿದ (1674).

	1677ರಲ್ಲಿ ರಾಜಾಸ್ಥಾನದ ಅಧಿಕೃತ ಚರಿತ್ರಕಾರನಾಗಿ ನಿಕೊಲಸ್ ನೇಮಕ ಹೊಂದಿದ್ದರಿಂದ, ಇವನ ಸಾಹಿತ್ಯ ಸೃಷ್ಟಿ ಸ್ವಲ್ಪ ಕುಂಠಿತವಾಯಿತು. ಸುತ್ತ ಮುತ್ತಲಿನ ವಾತಾವರಣ ಸ್ವಲ್ಪ ಬಿಸಿಯಾಯಿತು. ಆರಂಭದ ವರ್ಷಗಳಲ್ಲಿ ರಚಿಸಿದ್ದ ವಿಡಂಬನ ಕಾವ್ಯಗಳು ಶತ್ರುಗಳನೇಕರನ್ನು ಕೆರಳಿಸಿದುವು. ಅಂಗನೆಯರನ್ನು ಅಪಹಾಸ್ಯಮಾಡಿರುವ ಹತ್ತನೆಯ ವಿಡಂಬನ ಕಾವ್ಯವಂತೂ ಶತ್ರು ಸಂಕುಲವನ್ನೇ ನಿಕೊಲಸ್ ವಿರುದ್ಧ ಬಡಿದೆಬ್ಬಿಸಿದುವು. ಉಗ್ರ ಚರ್ಚೆಗಳು ನಡೆದುವು. ಈ ದೀರ್ಘ ಜಿಜ್ಞಾಸೆಗಳು ಮತಾಧಿಕಾರಿಗಳ ಗಮನ ಸೆಳೆದುವು. ವಿಡಂಬನೆ ಕ್ರಿಶ್ಚಿಯನ್ ತತ್ತ್ವಕ್ಕೆ ವಿರೋಧವೆಂದೂ ಹತ್ತನೆಯ ವಿಡಂಬನೆ ಕಾವ್ಯ ನೀತಿಧರ್ಮಗಳಿಗೆ ಅಪಚಾರವೆಸಗಿದೆಯೆಂದೂ ಧರ್ಮಾಧಿಕಾರಿಯೊಬ್ಬ ಅಭಿಪ್ರಾಯಪಟ್ಟ. ಇದರಿಂದ ಉದ್ರಿಕ್ತನಾದ ನಿಕೊಲಾಸ್ ಚರ್ಚೆಯನ್ನು ಇತ್ಯರ್ಥ ಮಾಡಲೋಸುಗವೋ ಎಂಬಂತೆ ತನ್ನ ಸೂರ್ ಲ ಆಮೂರ್ ಡೇ ಡಿಯೂ ಎಂಬ ಪತ್ರರೂಪದ ಪದ್ಯವನ್ನು ಬರೆದ. ಇದರಲ್ಲಿ ಸಾಹಿತಿಯ ಸ್ವಾತಂತ್ರ್ಯ, ಜವಾಬ್ದಾರಿ, ಕವಿಯ ಕಾರ್ಯಕ್ಷೇತ್ರ, ಕಲೆಯ ಘನತೆ ಮುಂತಾದ ವಿಷಯಗಳನ್ನು ಗಂಭೀರ ಶೈಲಿಯಲ್ಲಿ ಪ್ರತಿಪಾದಿಸಿ ತನ್ನ ಹಿರಿಮೆ ಮತ್ತು ವ್ಯಕ್ತಿತ್ವ ಸ್ಥಾಪಿಸಿದ. 1684ರಲ್ಲಿ ರಾಜಾನುಗ್ರಹದಿಂದ ಫ್ರೆಂಚ್ ಅಕಾಡೆಮಿಯ ಸದಸ್ಯತ್ವ ಪಡೆದ. 1687ರಲ್ಲಿ ಆಂಟೆನಲ್ ಎಂಬಲ್ಲಿಗೆ (ತಾನು ಕೊಂಡಿದ್ದ ಹಳ್ಳಿಮನೆಗೆ) ಹೋಗಿ ನೆಲಸಿದ. ಆದರೆ 1705ರ ವೇಳೆಗೆ ಆ ಮನೆಯನ್ನು ಮಾರಿ ಪ್ಯಾರಿಸ್‍ಗೆ ಮರಳಿ ಬಂದು ನಾಟ್ರ ಡೇಮಿನ ಸನ್ಯಾಸಿ ಗೃಹದಲ್ಲಿ ವಾಸಿಸತೊಡಗಿದ. ಅದೇ ವರ್ಷ ಜೆಸ್ಯೂಟ್ಸ್ ಎಂಬ ರೋಮನ್ ಕ್ಯಾತೋಲಿಕ್ ಮಂಡಲಿಯವರನ್ನು ಅಪಹಾಸ್ಯಮಾಡಿರುವ ಹನ್ನೆರಡನೆಯ ವಿಡಂಬನ ಕಾವ್ಯ ರಚಿಸಿದ. ಇದರ ಪ್ರಕಟಣೆಯ ವಿರುದ್ಧ ಜೆಸ್ಯೂಟ್ ಮಂಡಲಿಯವರು ರಾಜನಲ್ಲಿ ದೂರಿತ್ತರು. ತತ್ಪರಿಣಾಮವಾಗಿ ಆದ ಕಿರುಕುಳ ನಿಕೊಲಾಸ್‍ನನ್ನು ಮಾನಸಿಕ ಯಾತನೆಗೆ ಗುರಿಪಡಿಸಿತು. ಈತ 1711ರಲ್ಲಿ ನಿಧನಹೊಂದಿದ. ಈಗಲೂ ಫ್ರೆಂಚ್ ಸಾಹಿತ್ಯ ಚರಿತ್ರೆಯಲ್ಲಿ ಇವನಿಗೆ ಗಣ್ಯಸ್ಥಾನ ದೊರೆತಿರುವುದಕ್ಕೆ ಇವನ ಸರಳ ಶೈಲಿ, ಸ್ಪಷ್ಟ ನಿರೂಪಣೆ ಮತ್ತು ಖಚಿತ ಅಭಿಪ್ರಾಯಗಳು ಕಾರಣವಾಗಿವೆ.				(ಎನ್.ಎನ್.ಎಸ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ